A translation of Saadat Hasan Manto’s short story, ‘Khol Do’ from Hindi
ಅಮೃತ್ಸರ್ ನಿಂದ ರೇಲ್ ಹೊರಟಿತು. ಲಾಹೋರ್ ಮುಟ್ಟುವಷ್ಟರಲ್ಲಿ ಎಂಟು ಘಂಟೆ ಲೇಟ್ ಆಗಿತ್ತು. ದಾರಿಯಲ್ಲಿ ಸುಮಾರು ಜನ ಪ್ರಾಣ ಕಳ್ಕೊಂಡಿದ್ರು. ಎಷ್ಟೋ ಗಾಯಗೊಂಡಿದ್ದರು, ಎಷ್ಟೋ ಪತ್ತೆ ಇಲ್ಲದೆ ಹೋಗಿದ್ದರು. ದೇಶದ ಎರಡು ಭಾಗವಾಗುತ್ತಿತ್ತು.
ಸಿರಾಜ್ ಗೆ ಎಚ್ಚರ ಆದಾಗ ಬೆಳಗಾಗಿತ್ತು. ಅವನ ಕಣ್ಣ ಮುಂದೆ ಎಲ್ಲಾ ಸುತ್ತುವಂತಿತ್ತು. ದರೋಡೆ…ಕೊಲೆ… ಬೆಂಕಿ… ಓಡಾಟ… ಸ್ಟೇಷನ್ನು… ಬಂದೂಕಿನ ಗೋಲಿ… ಸಕೀನಾ. ಓ ಸಕೀನಾ ಎಲ್ಹೋದ್ಲು ? ತಕ್ಷಣ ಸಿರಾಜ್ ಎದ್ದು ನಿಂತ. ಸುಮಾರು ಘಂಟೆ ತನ್ನ ಹರೆ ಮಗಳನ್ನು ಹುಡುಕಿದ. ಆದರೆ ಸಕೀನಾ ಸಿಗಲಿಲ್ಲ.
ಎಲ್ಲಿ ನೋಡಿದರೂ ಜನರು ತಮ್ಮವರನ್ನು ಹುಡಕಾಡುತ್ತಿದ್ದರು. ಕೊನೆಗೂ ಸಿರಾಜ್ ದಣಿದು, ಸೋತು ಕೂತ. ನೆನಪು ಮಾಡಿಕೊಳ್ಳಲು ಶ್ರಮಿಸಿದ- ಸಕೀನಾ ಮತ್ತು ಅವಳ ಅಮ್ಮ ನನ್ನಿಂದ ಯಾವಾಗ ದೂರ ಹೋದದ್ದು. ಒಡನೆ ಸಕೀನಾಳ ಅಮ್ಮನ ಮೃತ ಶರೀರ, ಕಣ್ಣ ಮುಂದೆ ಬಂತು. ಸೀಳಿ ಹೋದ ಉದರ. ನೆತ್ತರದಿಂದ ಒದ್ದೆಯಾದ ಸೀರೆ. ಉಸಿರು ಕಟ್ಟಿಕೊಂಡು ಆಡಿದ ಅವಳ ಕೊನೆ ಮಾತುಗಳು- “ಸಕೀನಾಳನ್ನು ಕರ್ಕೊಂಡು ಓಡಿಹೋಗಿ. ನನ್ನನ್ನು ಬಿಟ್ಟು ಬಿಡಿ. ನಮ್ಮ ಮಗಳನ್ನು ಕಾಪಾಡಿ”- ಆ ಮಾತುಗಳು , ಆ ಧ್ವನಿ, ಈಗಲು ಸ್ಫುಟವಾಗಿವೆ. ಅವಳ ಮುಂಗೈ ಗಟ್ಟಿಯಾಗಿ ಹಿಡಿದು, ಓಡಿದ. ಬರಿ ಕಾಲಲ್ಲಿ ಹುಚ್ಚರ ತರ ಇಬ್ಬರು ಓಡಿದರು. ಅವಳ ದುಪ್ಪಟ್ಟ ಬಿತ್ತು. ಅದನ್ನು ಎತ್ತಿಕೊಳ್ಳಲು ಸಿರಾಜ್ ತುಸು ಗಳಿಗೆ ಕಾದ. ಓಡಾಡುವ ಜನರಾಶಿಯ ಕಾಲುಗಳಿಂದ ತಪ್ಪಿಸಿ ಎತ್ತಿದ ದುಪ್ಪಟ್ಟ . ಅದು ಈಗಲೂ ಅವನ ಜೇಬಿನಲ್ಲಿದೆ. ಆದರೆ ಅವಳೆಲ್ಲಿ?
ತಲೆ ಹೊಡ್ಕೊಂಡು ಸ್ಮರಿಸಲು ಯತ್ನಿಸಿದ. ಯಾವಾಗ ನನ್ನನು ಬಿಟ್ಟು ಹೋದ್ಲು ? ರೇಲ್ವೆ ಸ್ಟೇಷನ್ ವರೆಗೆ ಬಂದಿದ್ದಳೋ ಇಲ್ಲವೋ ? ಗಾಡಿಯಲ್ಲಿ ಕೂತಿದ್ದಳೋ ಇಲ್ಲವೋ ? ಗಲಾಟೆ ಮಾಡುವವರು ಅವಳನ್ನು…? ಏನೂ ನೆನಪಿಗೆ ಬರುತ್ತಿರಲಿಲ್ಲ. ಬಹಳ ದಿನ ಜೇಬಿನಲ್ಲಿ ಅವಳ ದುಪ್ಪಟ್ಟ ಇಟ್ಟುಕೊಂಡು ಅಲೆದಾಡುತ್ತಿದ್ದ.
ಸ್ವಲ್ಪ ದಿನದ ತರುವಾಯ, ಆಶೆ ಚಿಗುರಿತು. ಸಿರಾಜ್ ಗೆ ಎಂಟು ಯುವಕರು ಸಿಕ್ಕಿದರು. ಕೈಯ್ಯಲ್ಲಿ ಕೋಲು. ಬಂದೂಕು. ಟ್ರಕ್ ಬೇರೆ ಇತ್ತು. ಆ ಕಡೆ ಉಳಿದುಕೊಂಡ ಹೆಂಗಸರು ಮಕ್ಕಳನ್ನು ಕರ್ಕೊಂಡು ಬರಲು ಹೋಗುತ್ತಿದ್ದೇವೆ ಎಂದು ಹೇಳಿದರು. ಸಿರಾಜ್ ತನ್ನ ಮಗಳ ರೂಪ ವರ್ಣನೆ ಮಾಡಿದ. “ಬೆಳ್ಳಗಿರೊ ಹುಡುಗಿ. ದೊಡ್ಡ ಕಣ್ಣುಗಳು. ಕಪ್ಪು ಕೇಶ. ಬಲಗೆನ್ನೆಯಲ್ಲಿ ಎದ್ದು ಕಾಣುವ ಮಚ್ಚೆ. ವಯಸ್ಸು ಹದಿನೇಳು. ನನ್ನ ಮಗಳನ್ನು ಹುಡುಕಿ ಕರ್ಕೊಂಡು ಬನ್ನಿ. ಖುದಾ ಅನುಗ್ರಹಿಸುತ್ತಾನೆ.” ಹುಡುಗರು ಹೇಳಿದರು- “ಜೀವಂತ ಇದ್ದರೆ, ಪತ್ತೆ ಹಚ್ಚುತ್ತೇವೆ.”
ಅವರು ಅಮ್ರಿತ್ಸರ್ ಕಡೆ ಹೊರಟರು. ಅಲ್ಲಿಂದ ಹಿಂತಿರುಗುವಾಗ ರಸ್ತೆಯಲ್ಲಿ ಒಂದು ಹುಡುಗಿ ಕಾಣಿಸಿಕೊಂಡಳು. ಅಷ್ಟು ಯುವಕರನ್ನು ಕಂಡು ಧಾವಿಸಿದಳು. ಟ್ರಕ್ ನಿಲ್ಲಿಸಿ ಅವಳ ಹಿಂದೆ ಓಡಿದರು. ನಿಲ್ಲಿಸಿದರು. ಆಶ್ವಾಸನೆ ನೀಡಿದರು. “ಹೆದರಬೇಡ. ನೀನು ಸಿರಾಜ್ ಮಗಳು ಸಕೀನಾ ಅಲ್ಲವೇ ?” ಅಪರಿಚಿತ ತುಟಿಗಳಿಂದ ಮೂಡಿದ ತನ್ನ ಹೆಸರನ್ನು ಕೇಳಿ ದಿಗ್ಭ್ರಾಂತಳಾದಳು. ಆದರೂ ಒಪ್ಪಿಕೊಂಡಳು, “ಹೌದು, ನಾನು ಸಕೀನಾ.” ಹುಡುಗರು ಅವಳನ್ನು ತನ್ನ ತಂದೆಯ ಹತ್ತಿರ ಕರೆದುಕೊಂಡು ಹೋಗುವರೆಂದು ಭರವಸೆ ನೀಡಿದರು. ಸಕೀsನಾ ಅವರೊಂದಿಗೆ ಟ್ರಕ್ಕಿನಲ್ಲಿ ಹೊರಟಳು.
ಹಲವು ದಿನ ಕಳೆದವು. ಸಿರಾಜ್ ಗೆ ಸಕೀನಾಳ ಕುರಿತು ಯಾವುದೇ ಸುದ್ದಿ ತಲುಪಲಿಲ್ಲ. ಮತ್ತೊಂದುದಿನ ಆ ಯುವಕರನ್ನು ನೋಡಿದ. ಓಡಿ ಓಡಿ ಅವರ ಹತ್ತಿರ ಹೋದ. ಕೇಳಿದ- “ನನ್ನ ಸಕೀನಾಳ ಬಗ್ಗೆ ಏನಾದರೂ ಗೊತ್ತಾಯಿತೇನಪ್ಪಾ?” ಅದಕ್ಕೆ ಆ ಹುಡುಗರು, “ಇನ್ನೂ ಸಿಗಲಿಲ್ಲ.”
ಅದೇ ಸಂಜೆ. ನಾಲ್ಕು ಜನ, ಒಂದು ಸ್ಮೃತಿ ತಪ್ಪಿದ ಹೆಣ್ಣನ್ನು ಆಸ್ಪತ್ರೆಗೆ ಒಯ್ದುಕೊಂಡು ಹೋಗುತ್ತಿದ್ದರು. ಸಿರಾಜ್ ಅವರ ಹಿಂದೆಯೇ ಹೆಜ್ಜೆ ಹಾಕಿದ. ಧೈರ್ಯ ಮಾಡಿ ಆಸ್ಪತ್ರೆಯೊಳಗೆ ಕಾಲಿಟ್ಟ. ಅವಳು ಮಂಚದ ಮೇಲಿದ್ದಳು. ಯಾರೋ ದೀಪ ಹಚ್ಚಿದರು. ಕೋಣೆಯಲ್ಲಿ ತಕ್ಷಣ ಬೆಳಕು. ಸಿರಾಜ್ ಕೂಗಿದ, “ಸಕೀನಾ ! ಇವಳೇ ಸಕೀನಾ.” ಬಳಿ ನಿಂತಿದ್ದ ಡಾಕ್ಟರ್ ದಿಟ್ಟಿಸಿ ನೋಡಿದ. ಕಷ್ಟದಿಂದ ಮಾತು ಹೊರಳಿದವು- “ನಾನು ಅವಳ ತಂದೆ”. ಡಾಕ್ಟರ್ ಅವಳ ನಾಡಿ ಪರಿಶೀಲಿಸಿ, ಕಿಟಿಕಿಯ ಕಡೆ ಸನ್ನೆ ಮಾಡಿ, “ತೆಗೆದು ಬಿಡು” ಅಂದ.
“ತೆಗೆದು ಬಿಡು” ಕೇಳಿ ಸಕೀನಾ ತುಸು ಅಲ್ಲಾಡಿದಳು. ಇದನ್ನು ನೋಡಿದ ಸಿರಾಜ್ ಸಂತೋಷದಿಂದ ಒದರಿದ, “ನನ್ನ ಮಗಳು ಬದುಕಿದ್ದಾಳೆ ! ಬದುಕಿದ್ದಾಳೆ !”. ಅವಳ ಕಣ್ಣು ತೆರೆದಿರಲಿಲ್ಲ. ಆದರೆ ಅವಳ ಮೃತ ಹಸ್ತ ಶಲ್ವಾರ್ ನ ದಾರದ ಗಂಟು ಬಿಡಿಸಲು ಆರಂಭಿಸಿದವು. ಮೆಲ್ಲಗೆ ಗಂಟು ಬಿಚ್ಚಿದಳು . ಶಲ್ವಾರ್ ಕೆಳಗೆ ಜಾರಿಸಿದಳು. ಮತ್ತೆ ಅವಳ ಕಾಲುಗಳನ್ನು ಅಗಲ ಮಾಡಿದಳು. ಡಾಕ್ಟರ್ ನ ನೋಟ ನಾಚಿಗೆಯಿಂದ ತಗ್ಗಿದವು. ಅವನ ಹಣೆಯಿಂದ ಬೆವರಿನ ಹನಿ ಹೊಳಪುತ್ತಿತ್ತು.
